Thursday, July 19, 2012


ನನ್ನದೊಂದು ಮಾತು - ಐದು

'ರಾತ್ರಿಯೆಲ್ಲ ಕಣ್ಮುಚ್ಚಿಲ್ಲ'.

ಆಫೀಸು ಮುಗಿಸಿ ಬಂದ ತಕ್ಷಣ ಅವಳಾಡಿದ ಮಾತಿದು. ಬನ್ನೇರುಘಟ್ಟ ಅರಣ್ಯದಲ್ಲಿ  ಕಣ್ಮರೆಯಾಗಿ ಆನೆಯ ಕಾಲ್ತುಳಿತಕ್ಕೆ ಸಿಕ್ಕು ಮೃತನಾದವನು ಚಾರಣಕ್ಕೆ ಹೋಗಿದ್ದವನು ಎಂಬ ಟಿವಿ9 ಸುದ್ದಿಯನ್ನು ಕೇಳಿ ಕಳೆದ ರಾತ್ರಿ ನಿದ್ದೆ ಮಾಡಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಿದಳು. ಅದಕ್ಕೆ ಕಾರಣ ನಾನು ಊಹಿಸಿದ್ದರೂ ಅವಳನ್ನು ಕೇಳಿದೆ. ನಾನು ಕೂಡ ಆಗ್ಗಾಗ್ಗೆ ಚಾರಣಕ್ಕೆ ಹೋಗುತ್ತಿದ್ದುದರಿಂದ ನನಗೆಲ್ಲಿ ಅದೇ ಪರಿಸ್ಥಿತಿ ಬರುತ್ತದೋ ಎಂಬ ಕಳವಳ ಅವಳದು. ನನ್ನ ಊಹೆ ನಿಜವಾಗಿತ್ತು.  ಮುಂದೆಂದೂ ಚಾರಣಕ್ಕೆ ಹೋಗಬಾರದು ಎಂಬ ಆಜ್ಞೆ ಕೂಡ ಹೊರಬಿತ್ತು. ಎಷ್ಟೇ ಮುಂಜಾಗರೂಕತೆ ಇದ್ದರೂ ಚಾರಣದಲ್ಲಿ ಇಂತಹ ಒಂದು ಅಪಾಯದ ಸಾಧ್ಯತೆ ಇದೆ ಎಂಬ ಮಾತು ಎಷ್ಟು ಸಮಂಜಸವೋ ಮುಂದೆಂದೂ ಚಾರಣಕ್ಕೆ ಹೋಗಬಾರದು ಎಂಬ ಮಾತು ಅಷ್ಟೇ ಅಸಂಬದ್ದ. ಕಳೆದ ವಾರವಷ್ಟೇ ಯಾವುದೇ ಅಪಾಯ, ಅಡಚಣೆಯಿಲ್ಲದೆ  ಕೇರಳದ ಚೆಂಬ್ರ ಬೆಟ್ಟದಲ್ಲಿ ಚಾರಣ ಮಾಡಿದ್ದನ್ನು ನೆನೆದು ಅವಳು ಕೊಟ್ಟ ಕಾಫಿಯನ್ನು ಸವಿಯಲು ಮುಂದಾದೆ.

ಎಷ್ಟಾದರೂ ಮಾತೃ ಹೃದಯವಲ್ಲವೇ!

Friday, July 13, 2012


ದಿನಕ್ಕೊಂದು ನನ್ನದೊಂದು ಮಾತು - ನಾಲ್ಕು 


ಒಂದೇ ಸಮನೆ ಬರೆಯಲಾಗುತ್ತಿಲ್ಲ.

ದಿನಕ್ಕೊಂದು ನನ್ನಗನ್ನಿಸಿದ ಮಾತೊಂದನ್ನು ಬರೆಯುವ ಆಸೆ ಕುಂಟುತ್ತ ಸಾಗಿದೆ. ಇದಕ್ಕೆ ನನ್ನ ವಿಶ್ಲೇಷಣೆ - ರಚನಾತ್ಮಕತೆಯ ಕೊರತೆ, ಶಿಸ್ತಿನ ಕೊರತೆ ಹಾಗು ಭಾಷೆಯ ಮೇಲಿನ ಹಿಡಿತದ ಕೊರತೆ. ಈ ನನ್ನ ಕೊರತೆಗಳಲ್ಲಿ ಅಪಾಯಕಾರಿಯಾದದ್ದು ಮೂರನೆಯದು. ಬರೆಯಬೇಕನ್ನಿಸಿದ್ದು ಆಂಗ್ಲ ಮಿಶ್ರಿತ ಕನ್ನಡ ಪದಗಳಲ್ಲಿ ಮನಸಿನಲ್ಲಿ ಒಂದು ಅಸ್ಪಷ್ಟ ರೂಪ ತೆಗೆದುಕೊಳ್ಳುತ್ತದೆ. ಕನ್ನಡದಲ್ಲಿ ಬೇಕಾದ ಅಂಗ್ಲ ಪದಗಳ ತರ್ಜುಮೆಗೆ ಅಂತರ್ಜಾಲದಲ್ಲಿ ಸ್ವಲ್ಪ ಕಾಲ ವ್ಯಯವಾಗುತ್ತದೆ. ಆದಷ್ಟು ಬೇಗ ಅದರಿಂದ ಆಚೆ ಬರುವ ಮಾರ್ಗ ಹುಡುಕಬೇಕು - ಹೆಚ್ಚು ಕನ್ನಡ ಸಾಹಿತ್ಯ ( ಕಥೆ, ಕವನ, ದಿನಪತ್ರಿಕೆ, ಮುಂತಾದವು ) ಓದುವುದು  ಒಂದೇ ಮಾರ್ಗ. ಇದು ಇತರ ಎರಡು ಕೊರತೆಗಳ ಕಡಿವಾಣಕ್ಕು ಸಹಕಾರಿಯಾಗುತ್ತದೆ. ಅಲ್ಲಿವರೆಗೂ ಇಂತಹ  ಕಚ್ಚಾ ಬರಹಗಳ ಪ್ರಯೋಗ ನಡೆಯುತ್ತಲೇ ಇರುತ್ತದೆ. 


Wednesday, July 11, 2012

ದಿನಕ್ಕೊಂದು ನನ್ನದೊಂದು ಮಾತು - ಮೂರು 


'ಇಲ್ಲಿ ಸ್ವರ್ಣ ಪ್ರಾಷನ ಮಾಡಿಸಲಾಗುತ್ತದೆ.'

ಈ ಹಣೆಬರಹ ಹೊತ್ತ ಬ್ಯಾನರ್ ಮಹಾಲಕ್ಷ್ಮಿ ಲೇಔಟ್  ಅಂಗಡಿಯೊಂದರ ಮುಂದೆ ತೂಗುತ್ತಿತ್ತು. 'ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳ ಪುಷ್ಯ ನಕ್ಷತ್ರದ ದಿನದಂದು' ಎಂಬ ಅಡಿಬರಹವೂ ಇತ್ತು.ಅದು ಆಯುರ್ವೇದ ಪಂಡಿತರೊಬ್ಬರ ಅಂಗಡಿಯೆಂಬುದು ನನ್ನ ಗಮನಕ್ಕೆ ಬಂತು. ಕುತೂಹಲ ಹೆಚ್ಚಾಗಿ ಮನೆ ತಲುಪಿದ ನಂತರ ಅಂತರ್ಜಾಲ ಹೊಕ್ಕು, ದೊರೆತ ಮಾಹಿತಿ ಓದಿದಾಗ,  ಆಯುರ್ವೇದದ ವಿಸ್ತಾರದ ಬಗ್ಗೆ ನನ್ನಲ್ಲಿ ಅಚ್ಚರಿ ಮೂಡಿಸಿತು.

ಆಯುರ್ವೇದದ ಪ್ರಕಾರ 'ಸ್ವರ್ಣ ಪ್ರಾಷನ' ಅಥವಾ 'ಸ್ವರ್ಣ ಬಿಂದು ಪ್ರಾಷನ' ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸುಧಾರಿಸಿ ಮೆದುಳಿನ ಸಾಮರ್ಥ್ಯವೂ ಹೆಚ್ಚುತ್ತದೆ. ಇದು ಮೂರು ಅಂಶಗಳ ಮಿಶ್ರಣ - ಶುದ್ಧ ಮಧು, ಶುದ್ಧ ಸ್ವರ್ಣ ಭಸ್ಮ, ಔಷಧೀಯ  ಗಿಡಮೂಲಿಕೆಗಳಿಂದ ಪುಷ್ಠಿಕರವಾದ ತುಪ್ಪ/ ಘೃತ.
  • ಅಲ್ಪ ಪ್ರಮಾಣದಲ್ಲಿ ಶುದ್ಧ ಮಧು ಅಲೆರ್ಜಿ ಉಂಟುಮಾಡುವ ಅಲೆರ್ಜೆನ್ಸ್ ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ  
  • ಘೃತಕ್ಕೆ ಒಂದು ವಿಶಿಷ್ಟವಾದ ಗುಣಲಕ್ಷಣವಿದೆ - ಔಷಧೀಯ ಗಿಡಮೂಲಿಕೆಗಳ ಜೊತೆ ಬೆರೆತಾಗ ಅದರ ಗುಣಗಳನ್ನು ತನ್ನದಾಗಿಸಿಕೊಳ್ಳುತ್ತದೆ
  • ಶುದ್ಧ ಸ್ವರ್ಣ ಭಸ್ಮ - ಸುವರ್ಣ ಭಸ್ಮ ರೂಪದಲ್ಲಿ ಲಘು ಗುಣಾತ್ಮಕ ( ಸತ್ವ ಹೀರಿಕೊಳ್ಳುವುದು ಹಾಗು ಅರಗಿಸಿಕೊಳ್ಳುವುದು ), ಮೇಧಾ ವರ್ಧಕ ( ಜ್ಞಾಪಕ ಶಕ್ತಿ )
ಸ್ವರ್ಣ ಪ್ರಾಷನದ ಉಲ್ಲೇಖ ಕಾಶ್ಯಪ ಸಂಹಿತದಲ್ಲಿದೆ. 'ಸ್ವರ್ಣ ಪ್ರಾಷನದಿಂದ ಶಿಶುವಿನ ಮೇಧ ( ಬುದ್ಧಿ ಶಕ್ತಿ ), ಅಗ್ನಿ(ಜೀರ್ಣ ಶಕ್ತಿ ), ಆಯು ವರ್ಧನ ( ಆಯುಷ್ಯ ಹೆಚ್ಚುವಿಕೆ ), ಮಂಗಳಕರ ( ಗುಣಾತ್ಮಕ ಭಾವನೆಗಳು ), ವೃಶ್ಯ ( ಆಕರ್ಷಕ ವ್ಯಕ್ತಿತ್ವ ), ವರ್ಣ್ಯ (ಕಾಂತಿಯುಕ್ತ ದೇಹ), ಗೃಹ ಬಾಧಾನಾಷಕ ( ದುಷ್ಟ ಶಕ್ತಿಗಳಿಂದ ದೂರ ) ಗುಣಗಳು ಅಭಿವೃದ್ಧಿ ಹೊಂದುತ್ತದೆ. ಸ್ವರ್ಣ ಪ್ರಾಷನವನ್ನು 30 ಬಾರಿ ಮಾಡಿಸಿದಲ್ಲಿ ಶಿಶುವು ಪರಮ ಮೇಧಾವಿ ಹಾಗು ಯಾವುದೇ ವ್ಯಾಧಿಗಳಿಗೆ ತುತ್ತಗುವುದಿಲ್ಲ; 180 ಬಾರಿ ಮಾಡಿಸಿದಲ್ಲಿ ಶ್ರುತಾಧಾರನಾಗುತ್ತಾನೆ/ಳೆ ( ಕೇಳಿದ್ದನ್ನು ನೆನಪಿನಲ್ಲಿ ಉಳಿಯುವ , ಉತ್ತಮ ಗ್ರಹಿಕಾ ಸಾಮರ್ಥ್ಯ )'

ಕಾಶ್ಯಪ ಮುನಿ ರಚಿತ 'ಕಾಶ್ಯಪ ಸಂಹಿತ' ಇಂತಹ ಅನೇಕ ಪ್ರಾಚೀನ ಅಥವಾ ಪುರಾತನ ಮಾಹಿತಿಗಳ ಸಂಕಲನವಾಗಿದೆ. 

Friday, July 6, 2012

ದಿನಕ್ಕೊಂದು ನನ್ನದೊಂದು ಮಾತು - ಎರಡು


ಹೊಸದೊಂದು ಆಸೆ ಹುಟ್ಟಿದೆ.

UNESCO ಅಂಗ ಸಂಸ್ಥೆಯಾದ World Heritage Center ಪ್ರಪಂಚದಾದ್ಯಂತ ಕೆಲವು ಸಾಂಸ್ಕೃತಿಕ/ನೈಸರ್ಗಿಕ  ತಾಣಗಳನ್ನು ವಿಶ್ವ ಪಾರಂಪರಿಕ ತಾಣ/World Heritage Site  ಎಂದು ಘೋಷಿಸುತ್ತದೆ. ಭಾರತದ 29 ತಾಣಗಳು WHS ಪಟ್ಟಿಯಲ್ಲಿದೆ.   ಪಟ್ಟಿಯಲ್ಲಿರುವ ಕರ್ನಾಟಕದ 3 ತಾಣಗಳು -
  • ಪಟ್ಟದಕಲ್ಲು
  • ಹಂಪಿ
  • ಪಶ್ಚಿಮ ಘಟ್ಟಗಳ 10 ತಾಣಗಳು - ಪುಷ್ಪಗಿರಿ ವನ್ಯಜೀವಿ ಧಾಮ, ಬ್ರಹ್ಮಗಿರಿ ವನ್ಯ ಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ, ಪಡಿನಲಕ್ನಾಡ್ ಸಂರಕ್ಷಿತ ಅರಣ್ಯ, ಕೇರ್ತಿ ಸಂರಕ್ಷಿತ ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಧಾಮ, ಸೋಮೇಶ್ವರ ಸಂರಕ್ಷಿತ ಅರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ, ಬಾಲಹಳ್ಳಿ ಸಂರಕ್ಷಿತ ಅರಣ್ಯ
ಸಾಧ್ಯವಾದಷ್ಟು ಪ್ರಪಂಚದ ಎಲ್ಲ ಪಾರಂಪರಿಕ ತಾಣಗಳನ್ನು ನೋಡುವ ಆಸೆಯಾಗಿದೆ. ಕನಿಷ್ಠ ಪಕ್ಷ ಭಾರತ ಎಲ್ಲ 29 ತಾಣಗಳು , ಅದೂ ಸಾಧ್ಯವಾಗದಿದ್ದಲ್ಲಿ ಕರ್ನಾಟಕ ಹಾಗು ಅದರ ಸುತ್ತುಮುತ್ತಲಿನ ರಾಜ್ಯಗಳಲ್ಲಿರುವ ತಾಣಗಳನ್ನಾದರೂ ನೋಡಿಯೇ ತೀರಬೇಕು. ಸಮಯ ಹಾಗು ಹಣದ ಅಭಾವ ಇಲ್ಲದಂತೆ ಆ ಭಗವಂತ ನೋಡಿಕೊಳ್ಳಲಿ !

Thursday, July 5, 2012

ದಿನಕ್ಕೊಂದು ನನ್ನದೊಂದು ಮಾತು - ಒಂದು


ಪ್ರತಿ ದಿನ ನನಗನ್ನಿಸಿದ ಒಂದೆರಡು ಸಾಲುಗಳನ್ನು ಬರೆಯುವ ಪ್ರಯತ್ನಕ್ಕೆ ಇದು ನನ್ನ ಮೊದಲ ಸೇರ್ಪಡೆ. ಹಲವು ದಿನಗಳ ನಂತರ ಬರೆಯುವ ನನ್ನ ಬಯಕೆಗೆ ಸಾಲುಗಳು ಸುಲಭವಾಗಿ ದೊರೆಯಲೆಂದು ನನ್ನ ಯೋಚನಾ ಲಹರಿಗೆ ಮೊದಲು ಮನವಿ. ಬರೆದದ್ದನ್ನು ಓದುಗನಿಗೆ ತಲುಪಿಸುವ ಬಗ್ಗೆ ಚಿಂತನೆ ಮಾಡಲು ಸಾಕಷ್ಟು ಸಮಯವಿದೆ. ಬರಹಗಳು ಪಕ್ವವಾಗಬೇಕು. ಓದುಗ ಆಸಕ್ತಿ ಕಳೆದುಕೊಳ್ಳಬಾರದು. ಆ ಹಂತ ತಲುಪಲು ಸ್ವಲ್ಪ ಸಮಯದ ಅವಶ್ಯಕತೆ ಇದೆ. ಅಲ್ಲಿಯವರೆಗೂ ಕ್ರಮಬದ್ಧವಿಲ್ಲದೆ ಕಟ್ಟಿದ ಸಾಲುಗಳಿಗೆ ನಾನೇ ಹೊಣೆ.